Thursday, 5 March 2026

ಹರೀಶ್ ನಲ್ಕೆ ಅವರ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಫಿ ಪದವಿ

‘’ಚಿಕ್ಕಮಗಳೂರು ಜಿಲ್ಲೆಯ ದಲಿತ ಚಳುವಳಿ : ಸಮಕಾಲೀನ ಅಧ್ಯಯನ " ಎಂಬ ವಿಷಯದ ಬಗ್ಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಸಾಹಿತಿ ಹರೀಶ್ ನಲ್ಕೆಯವರಿಗೆ ಡಾಕ್ಟರ್ ಆಫ್ ಫಿಲಾಸಫಿ ಪ್ರದಾನ ಮಾಡಲಾಗಿದೆ.

ಬೇಲೂರು ತಾಲ್ಲೂಕು ಅರೇಹಳ್ಳಿ ಹೊಬಳಿ ನಲ್ಕೆ ಗ್ರಾಮದ ದಿವಂಗತ ಶ್ರೀ ಸಣ್ಣಯ್ಯ ಮತ್ತು ಬೈರಮ್ಮ ನವರ  ಪುತ್ರನಾಗಿ ಜನಿಸಿದ ಹರೀಶ್     ಪದವಿ ಶಿಕ್ಷಣವನ್ನು ಮೂಡಿಗೆರೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದ್ದು ಉನ್ನತ ಶಿಕ್ಷಣಕ್ಕಾಗಿ ಕುವೆಂಪು ವಿಶ್ವ ವಿದ್ಯಾಲಯಕ್ಕೆ ತೆರಳಿ ಇತಿಹಾಸ ಮತ್ತು ಪ್ರಾಕ್ತಾನ ಶಾಸ್ತ್ರ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಯೋಗ ಪದವಿಯಲ್ಲಿ ರಾಂಕ್ ಪಡೆದು, ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ಯೋಗ ನವದೆಹಲಿ ವತಿಯಿಂದ ಚಿಕ್ಕಮಗಳೂರು ಜಿಲ್ಲೆಗೆ ಯೋಗ ತರಬೇತುದಾರರಾಗಿ ಆಯ್ಕೆಯಾಗುತ್ತಾರೆ.

ಇವರ ಸೇವಾ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯುತ್ತಮ ಯೋಗ ಶಿಕ್ಷಕರಾಗಿ ಕಾರ್ಯನಿರ್ವಾಹಿಸಿದ್ದು,"ಯೋಗ ಸಂಜೀವಿನಿ " ಯೋಗ ಚೇತನ" ಎಂದು ಎರಡು ಪುಸ್ತಕಗಳನ್ನು ಹೊರ ತಂದವರಲ್ಲದೆ ಚಿಕ್ಕಮಗಳೂರಿನ ಡಿಸಿ, ಎಸಿ ಹಾಗೂ ಅವರ ಸಿಬ್ಬಂದಿಗಳಿಗೆ ಯೋಗ ತರಬೇತಿ ನೀಡಿರುತ್ತಾರೆ. ಅಲ್ಲದೇ ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿ ವರ್ಗದವರಿಗೆ, ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಾಗೂ ಚಿಕ್ಕಮಗಳೂರಿನ ಬಾಲ ಭವನ ವಿದ್ಯಾರ್ಥಿಗಳಿಗೆ,  ಸಂಘ ಸಂಸ್ಥಯ ಪದಾಧಿಕಾರಿಗಳಿಗೆ ಶೃಂಗೇರಿ, ಅಜ್ಜಂಪುರ, ತರೀಕೆರೆ, ತಾಲೂಕುಗಳಲ್ಲಿ ಹಿರಿಯ ನಾಗರಿಕರಿಗೆ ಯೋಗ ತರಬೇತಿ ನಿಡಿದವರು. ಇವರ ಸೇವೆಯನ್ನು ಗುರುತಿಸಿ ಆಯುಷ್ ಇಲಾಖೆ ಚಿಕ್ಕಮಗಳೂರು ವತಿಯಿಂದ ಬೆಟ್ಟದ ಮನೆ ಸರ್ಕಾರಿ ಆಯುಷ್ ಹಾಸ್ಪಿಟಲ್ ಗೆ ಯೋಗ ತರಬೇತಿದಾರರಾಗಿ ನೇಮಕಗೊಂಡಿರುತ್ತಾರೆ.

ಚಳುವಳಿಯಲ್ಲಿ ಸಕ್ರೀಯರಾಗಿದ್ದ ಇವರು ದಲಿತ ಚಳುವಳಿಗಾರರ ಬಗ್ಗೆ ಸಂಶೋಧನೆ ನಡೆಸುವ ಸಲುವಾಗಿ ಯೋಗ ಶಿಕ್ಷಕ ಹುದ್ದೆಯನ್ನು ತಿರಸ್ಕರಿಸಿ,, ಕನ್ನಡ ವಿಶ್ವವಿದ್ಯಾನಿಲಯದ ಚರಿತ್ರೆ ವಿಭಾಗದ ಮಾನ್ಯತೆ ಕೇಂದ್ರವಾದ ಡಾ. ಹಾಮಾನ ಸಂಶೋಧನೆ ಕೇಂದ್ರ ಉಜಿರೆ , ಸಂಶೋಧನಾ ಕೇಂದ್ರದ ವತಿಯಿಂದ ಚರಿತ್ರೆ ವಿಭಾಗದಲ್ಲಿ ಪ್ರೋ. ಸುರೇಶ್  ರೈ ಕೆ ರವರ ಮಾರ್ಗದರ್ಶನದಲ್ಲಿ ‘’ ಚಿಕ್ಕಮಗಳೂರು ಜಿಲ್ಲೆಯ ದಲಿತ ಚಳುವಳಿ : ಸಮಕಾಲೀನ ಅಧ್ಯಯನ " ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಜಿಲ್ಲೆಯ ನೂರಾರು ದಲಿತ ಪ್ರಗತಿಪರ ಹೋರಾಟಗಾರರನ್ನು ಚರಿತ್ರೆಯ ಪುಟಗಳಲ್ಲಿ ದಾಖಲು ಮಾಡಿ ವಿಶ್ವವಿದ್ಯಾಲಯದಲ್ಲಿ ಮಹಾಪ್ರಂಬಧವನ್ನು ನಿರರ್ಗಳವಾಗಿ ಮಂಡಿಸಿ ಕನ್ನಡ ವಿಶ್ವ ವಿದ್ಯಾಲಯದ 34ನೇ ನುಡಿ ಹಬ್ಬದಂದು ಕರ್ನಾಟಕ ಸರ್ಕಾರದ ಘನವೆತ್ತ ರಾಜ್ಯಪಾಲರಿಂದ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪಡೆದಿರುತ್ತಾರೆ.

 ಇವರು ಅನೇಕ ದಲಿತಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಸಕ್ರಿಯರಾಗಿದ್ದಾರೆ ಅಲ್ಲದೆ ಉತ್ತಮ ನಿರೂಪಕರು, ಗಾಯಕರು, ಲೇಖಕರು, ವಿಮರ್ಶಕರು, ಆಪ್ತಸಮಲೋಚಕರಾದ ಇವರು  "ಯೋಗಚೇತನ" "ಯೋಗ ಸಂಜೀವಿನಿ " "ಮೂಡಿಗೆರೆ ತಾಲ್ಲೂಕಿನ ದಲಿತ ಸಂಸ್ಕೃತಿ ಒಂದು ಅಧ್ಯಯನ "ಎಂಬ ಪುಸ್ತಕಗಳನ್ನು ಬರೆದಿದ್ದರಲ್ಲದೆ ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ದಲಿತ ಚಳುವಳಿಯಲ್ಲಿ ಸಕ್ರಿಯರಾಗಿದ್ದಾರೆ. ಮಾತ್ರವಲ್ಲದೆ, ವಿದ್ಯಾರ್ಥಿ ಸಮುದಾಯಕ್ಕೆ ಮಾರ್ಗದರ್ಶಕರಾಗಿ ಹಲವಾರು ಸ್ಫರ್ಧಾತ್ಮಕ ಪರೀಕ್ಷೆಗಳ ಕಾರ್ಯಗಾರಗಳನ್ನು ರೂಪಿಸುತ್ತಿದ್ದಾರೆ ಮಾತ್ರವಲ್ಲದೆ ಯುವ ಸಮುದಾಯವನ್ನು ವೈಚಾರಿಕವಾಗಿ ಸಂಘಟಿಸಿ ಜನಪರ ಹೋರಾಟಗಳನ್ನು ರೂಪಿಸುವಂತೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜನಪರ ಚಿಂತಕರಾಗಿರುವ ಹರೀಶ್ ನಲ್ಕೆ ಅವರಿಗೆ ಕನ್ನಡ ವಿಶ್ವವಿದ್ಯಾನಿಲಯ ದ ಚರಿತ್ರೆ ವಿಭಾಗದಿಂದ ಡಾಕ್ಟರ್ ಆಫ್ ಫಿಲಾಸಫಿ ಪದವಿ ದೊರೆತಿದೆ. ಇದು ದಲಿತ ಚಳುವಳಿಗೆ ಸಂದ ಗೌರವವಾಗಿದೆ.

No comments:

Post a Comment