ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ ಇಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ದೇಸಿ ತಳಿ ಭತ್ತ ಸಂರಕ್ಷಣೆ ಮತ್ತು ಉತ್ತೇಜನ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಶ್ರೀವತ್ಸವ ಮಾತನಾಡಿ ನಶಿಸಿ ಹೋಗುತ್ತಿರುವ ದೇಸಿ ತಳಿಯ ಭತ್ತದ ಬೆಳೆ ಉಳಿಸಲು ಮತ್ತು ಉತ್ತೇಜಿಸಲು ಅರಿವು ಮೂಡಿಸಿದರು ಹಾಗೂ ದೇಸಿ ತಳಿಯ ವಿವಿದ ಭತ್ತದ ಬಗ್ಗೆ ಪರಿಚಯಿಸಿ ರೈತರಿಗೆ ಮಾಹಿತಿ ನೀಡಿದರು.
ಕಣ್ಮರೆಯಾಗುತ್ತಿರುವ ಭತ್ತದ ತಳಿಗಳ ಸಂರಕ್ಷಿಸುವ ಜೊತೆಗೆ ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳನ್ನು ಗುರುತಿಸಿ ಸಂರಕ್ಷಣೆ ಮಾಡಿ ದೇಸಿ ತಳಿಗಳನ್ನು ಅಭಿವೃದ್ಧಿಪಡಿಸಬೇಕೆಂದರು.
ಪ್ರಗತಿಪರ ರೈತರಾದ ಅರುಣ್ ಕುಮಾರ್ ಮಾತನಾಡಿ ಅವತ್ತಿನ ಕಾಲಕ್ಕೆ ಹೋಲಿಸಿದರೆ ಇಂದು ಸಾಕಷ್ಟು ಬದಲಾವಣೆಗಳಾಗಿದ್ದು ತುಂಬಾ ದೊಡ್ಡ ಪ್ರಮಾಣದಲ್ಲಿ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವ ವಿದ್ಯಾನಿಲಯವು ಮಾಡುತ್ತಿದೆ. ಮೂಲ ಸಂತತಿಗಳನ್ನು ನಾವು ಮರೆಯಬಾರದು, ರಾಸಾಯನಿಕ ಕೃಷಿ ಹಿನ್ನೆಲೆಯಲ್ಲಿ ಹಸಿರು ಕ್ರಾಂತಿ ಪ್ರಾರಂಭವಾಯಿತು . ಹಸಿರು ಕ್ರಾಂತಿ ಪ್ರಾರಂಭವಾದ ಮೇಲೆ ಸಾವಯವ ಬೀಜಗಳು, ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು, ರೋಗ ನಾಶಕಗಳು, ಬಂದವು ಈಗ ಕೂಲಿ ಆಳುಗಳ ಸಮಸ್ಯೆಯಿಂದ ಕಳೆ ನಾಶಕಗಳು ಬಂದವು ಇಂತಹ ಗಂಭೀರವಾದ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ ಹೋದರೆ ಮುಂದೊಂದು ದಿನ ನಾವು ಪ್ರಪಾತಕ್ಕೆ ಹೋಗುವ ಪರಿಸ್ಥಿತಿ ಬರುತ್ತದೆಂದರು.
ಸಾವಯವ ಕೃಷಿ ಮಾಡುವುದರಿಂದ ಹೆಚ್ಚು ಇಳುವರಿ ಬರದಿರಬಹುದು ಆದರೆ ನಮ್ಮ ಪ್ರದೇಶಕ್ಕೆ ನಮ್ಮ ಸುತ್ತಮುತ್ತ ಇರುವ ರೈತರಿಗೆ ಸರಿಸಾಟಿ ಬೆಳೆಯನ್ನು ಬೆಳೆಯಲು ನಾವು ಸಮರ್ಥರಿದ್ದೇವೆ. ಪ್ರತಿಯೊಬ್ಬ ರೈತರು ಹೊಟ್ಟೆಗಾಗುವಷ್ಟು ನಮ್ಮ ಮನೆ, ನಮ್ಮ ಕುಟುಂಬ, ನಮ್ಮ ನೆಂಟರಿಷ್ಟರಿಗಾಗುವಷ್ಟಾದರೂ ಆಹಾರ ಪದಾರ್ಥ ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.
ಈ ದೇಸಿ ಭತ್ತದ ಬೆಳೆಯ ಸಂರಕ್ಷಣೆ ಮತ್ತು ಉತ್ತೇಜನದ ಕಾರ್ಯಕ್ರಮದಲ್ಲಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳು ಡಾ.ಎ. ಟಿ ಕೃಷ್ಣಮೂರ್ತಿ, ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ವೈಜ್ಞಾನಿಕ ಸಲಾ ಸಮಿತಿ ಸದಸ್ಯರಾದ ಹೆಚ್ ಕೆ ಪೂರ್ಣೇಶ್, ಡಿಡಿಎ ಕುಮುದಾ, ಸಹಾಯಕ ಕೃಷಿ ನಿರ್ದೇಶಕರಾದ ಸುಮಾ, ಕೃಷಿ ಅಧಿಕಾರಿ ಗೀತಾ, ತಾಂತ್ರಿಕ ವ್ಯವಸ್ಥಾಪಕರು ರಶ್ಮಿ, ಅನನ್ಯ ಹಾಗೂ ಮೂಡಿಗೆರೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತ ಬಾಂಧವರು ಉಪಸ್ಥಿತರಿದ್ದರು.

No comments:
Post a Comment