Wednesday, 4 March 2026

ಬಾಳೆಹೊನ್ನೂರು- ರಂಭಾಪುರಿ ಪೀಠದಲ್ಲಿ ಸಂಗೀತ ಸೌರಭ ಕಾರ್ಯಕ್ರಮ, ಸಂಗೀತ ಜೀವನದ ಅವಿಭಾಜ್ಯ ಅಂಗ : ಶ್ರೀ ರಂಭಾಪುರಿ ಜಗದ್ಗುರುಗಳು

ನೊಂದ ಮನಕ್ಕೆ ಶಾಂತಿ ನೆಮ್ಮದಿ ನೀಡುವ ಶಕ್ತಿ ಸಂಗೀತಕ್ಕಿದೆ. ಸಂಗೀತ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

      ಅವರು ಭಾನುವಾರ ಸಂಜೆ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಸಂಗೀತ ಸೌರಭ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

      ಹಿಂದೂಸ್ಥಾನಿ ಸಂಗೀತವೇ ಇರಬಹುದು ಕರ್ನಾಟಕ ಶಾಸ್ತ್ರೀಯ ಸಂಗೀತವೇ ಇರಬಹುದು ಕಿವಿಗೆ ಇಂಪನ್ನು ಮನಸ್ಸಿಗೆ ಮುದವನ್ನು ನೀಡುವ ಶಕ್ತಿ ಹೊಂದಿವೆ. ಸಂಗೀತವನ್ನು ಕೇಳಿದ ಸಸ್ಯಗಳು ಸೊಂಪಾಗಿ ಬೆಳೆಯುತ್ತವೆ ಎಂದು ವಿಜ್ಞಾನಿಗಳು ಪ್ರಯೋಗಗಳ ಮೂಲಕ ಕಂಡುಕೊಂಡಿದ್ದಾರೆ. ಭಕ್ತಿ ಗೀತೆಗಳನ್ನು ಕೇಳಿದಾಗ ಅವ್ಯಕ್ತ ಭಕ್ತಿಯ ಭಾವನೆ ಉಂಟಾಗುವುದು ನಮ್ಮೆಲ್ಲರ ಗಮನಕ್ಕೆ ಬಂದ ವಿಷಯವಾಗಿದೆ ಎಂದರು.

      ಗದಗಿನ ಖ್ಯಾತ ಗಾಯಕ ಪಂ. ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಮತ್ತು ಸಂಗಡಿಗರು ಒಂದು ಗಂಟೆಗಳ ಕಾಲ ತಮ್ಮ ಸುಶ್ರಾವ್ಯ ಸಂಗೀತದ ಮೂಲಕ ಜನಮನವನ್ನು ಸೂರೆಗೊಂಡರು.

      ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಸಮಾರಂಭವನ್ನು ಉದ್ಘಾಟಿಸಿದರು. ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ, ಕಾಂಗ್ರೆಸ್ ಧುರೀಣರಾದ ಶ್ರೀಮತಿ ಬಿ.ಸಿ. ಗೀತಾ ಯಡ್ರಾಮಿಯ, ಚಂದ್ರಶೇಖರ ಪುರಾಣಿಕ ಮುಖ್ಯ ಅತಿಥಿಗಳಾಗಿದ್ದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಸಿಂದಗಿ, ಎಡೆಯೂರು, ಆವರಗೊಳ್ಳ, ರಾಯಚೂರು ಕಿಲ್ಲೆ ಬೃಹನ್ಮಠ, ಹೊನ್ನಕಿರಣಗಿ, ಶ್ರೀನಿವಾಸ ಸರಡಗಿ, ಸ್ಟೇಶನ್ ಬಬಲಾದ, ಹರಪನಹಳ್ಳಿ, ಮಳಲಿ, ಶಿವಗಂಗಾ, ತಾವರೆಕೆರೆ, ಬೀರೂರು, ಬಿಳಿಕಿ, ತಡವಲಗಾ, ಭಾವಿ, ಉದ್ಗಿರಿ, ನಂಜನಗೂಡು, ಮಾನಿಹಳ್ಳಿ, ಅಚಲೇರಿ, ಹಣ್ಣೆಮಠ, ಕಲ್ಬಾಳು, ನಾಗಲಾಪುರ, ರಾಜಾಪುರ, ಚನ್ನಗಿರಿ, ಹಾರನಹಳ್ಳಿ, ಹುಡುಗಿ ಮಠಗಳ ಮಠಾಧೀಶರು ಉಪಸ್ಥಿತರಿದ್ದರು.

     ಬಾಳೆಹೊನ್ನೂರು ಆರ್.ಡಿ.ಮಹೇಂದ್ರ ಸ್ವಾಗತಿಸಿದರು. ಹಂಪಸಾಗರ ನವಲಿ ಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು. ಗುರುಲಿಂಗಯ್ಯ ಹಿತ್ತಲಶಿರೂರು ಇವರಿಂದ ಪ್ರಾರ್ಥನೆ ಜರುಗಿತು.

No comments:

Post a Comment