ಗುರುವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಬಜೆಟ್ ಮಂಡನೆ ಮತ್ತು ಸರ್ಕಾರದಿಂದ ಆಗಿರುವ ಅನ್ಯಾಯಗಳನ್ನು ಸರಿಪಡಿಸುವಂತೆ ಆಗ್ರಹಿಸಿ, ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸಿದ್ದರಾಮಯ್ಯನವರ ಕಾಲಾವಧಿಯಲ್ಲೇ 5.84 ಲಕ್ಷ ಕೋಟಿ ರೂಪಾಯಿ ಸಾಲ ಆಗಿದೆ. ಸಿದ್ದರಾಮಯ್ಯನವರದ್ದು ಚಾಣಕ್ಯ ನೀತಿಯಲ್ಲ, ಚಾರ್ವಾಕ ನೀತಿ. ಹೇಗೆ ಹೂವಿಗೆ ನೋವಾಗದಂತೆ, ಮಕರಂದವನ್ನು ದುಂಬಿ ಹೀರುತ್ತದೋ, ಹಾಗೆ ತೆರಿಗೆ ಸಂಗ್ರಹಿಸಬೇಕು ಎನ್ನುವುದು ಚಾಣಕ್ಯ ನೀತಿ. ಆದರೆ, ಸಿದ್ದರಾಮಯ್ಯನವರು ಎಲ್ಲದರ ಬೆಲೆ ಏರಿಕೆ ಮಾಡಿ, ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವುದು ಚಾರ್ವಾಕ ನೀತಿಯಾಗಿದ್ದು, ಈ ಸರ್ಕಾರ ಆ ಹಾದಿಯಲ್ಲಿರುವಂತೆ ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಹೇಳಿದರು.
ರಾಜ್ಯದ ಆರ್ಥಿಕ ವ್ಯವಸ್ಥೆ ಹಳಿತಪ್ಪಿರುವುದು ದುಃಖದ ವಿಚಾರ. ಸಿದ್ದರಾಮಯ್ಯನವರಂತಹ ಅನುಭವಿ ಆರ್ಥಿಕ ಸಚಿವರಿದ್ದಾಗ ಇಂತಹ ಪರಿಸ್ಥಿತಿ ನಿರ್ಮಾಣವಾಗಬಾರದಿತ್ತು. ಈ ವರ್ಷದ ಸಾಲಕ್ಕೆ 48,000 ಕೋಟಿ ರೂಪಾಯಿ ಬಡ್ಡಿ ಕಟ್ಟಲಾಗಿದ್ದು, ಇದಕ್ಕೂ ಸಾಲ ಮಾಡಲಾಗಿದೆ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಮುಳುಗುತ್ತಿರುವ ಹಡಗು ಎನ್ನಬೇಕಷ್ಟೇ. ರಾಜ್ಯದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ, ಔಷಧಿ ಖರೀದಿಗೆ ಹಣವಿಲ್ಲ. ಸರ್ಕಾರಿ ವೈದ್ಯರ ಸಂಘವೇ ವಿವಿಧ ಬೇಡಿಕೆಗಳಿಗಾಗಿ ಚಳುವಳಿಗೆ ಕರೆ ನೀಡಿದ್ದಾರೆ. ಅವರು ಪ್ರಮುಖವಾಗಿ ಕಾಲಕಾಲಕ್ಕೆ ಔಷಧ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ನಾನು ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದನ್ನು ರಾಜಕೀಯ ಉದ್ದೇಶ ಎಂದವರು ಈಗ ಸರ್ಕಾರಿ ವೈದ್ಯರದ್ದೂ ರಾಜಕೀಯ ಉದ್ದೇಶ ಎನ್ನುತ್ತಾರೆಯೇ? ಎಂದು ರವಿ ಪ್ರಶ್ನಿಸಿದರು.
ಇಷ್ಟೆಲ್ಲಾ ಸಾಲ ಮಾಡಿದರೂ, ಔಷಧ ಖರೀದಿಗೆ, ಗುತ್ತಿಗೆದಾರರ ಬಾಕಿ ಪಾವತಿಗೆ, ಅರೆಕಾಲಿಕ ಉಪನ್ಯಾಸಕರ ವೇತನಕ್ಕೆ, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಅಡುಗೆ ಸಹಾಯಕರು, ಎಲ್ಲರೂ ಹೋರಾಟಕ್ಕೆ ಇಳಿದಿದ್ದಾರೆ. ಇಷ್ಟೊಂದು ಸಾಲ ಮಾಡಿದ್ದರೂ, ಆ ಹಣ ಎಲ್ಲಿ ಹೋಯಿತು? ಇಷ್ಟೆಲ್ಲಾ ಬೆಲೆ ಏರಿಕೆ ಮಾಡಿದರೂ, ಹಣ ಪಾವತಿ ಯಾಕಾಗಿಲ್ಲ? ಬಸ್ ಟಿಕೆಟ್ ದರ, ವಿದ್ಯುತ್ ದರ, ಪೆಟ್ರೋಲ್ ಡೀಸೆಲ್ ಮೇಲೆ ಸೆಸ್, ಸ್ಟ್ಯಾಂಪ್ ಡ್ಯೂಟಿ, ಅಬಕಾರಿ ತೆರಿಗೆ, ವಾಹನ ನೋಂದಣಿ ಶುಲ್ಕ, ಜನನ - ಮರಣ ಪ್ರಮಾಣಪತ್ರ, ಸರ್ಕಾರಿ ಆಸ್ಪತ್ರೆಗಳ ಒಪಿಡಿ ನೋಂದಣಿ, ಎಲ್ಲದರ ಬೆಲೆಯನ್ನೂ ಸರ್ಕಾರ ಏರಿಸಿದೆ ಎಂದು ರವಿ ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎಂ.ಆರ್. ದೇವರಾಜ್ ಶೆಟ್ಟಿ, ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿಗಳಾದ ಸೀತಾರಾಮ ಭರಣ್ಯ, ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷರಾದ ಕೆ.ಪಿ ವೆಂಕಟೇಶ್, ಎಸ್ಟಿ ಮೋರ್ಚಾ ರಾಜ್ಯ ವಕ್ತಾರರಾದ ಶೃಂಗೇರಿ ಶಿವಣ್ಣ, ಜಿಲ್ಲಾ ಬಿಜೆಪಿ ವಕ್ತಾರರಾದ ಹಿರೇಮಗಳೂರು ಪುಟ್ಟಸ್ವಾಮಿ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷರಾದ ನಂದೀಶ್ ಮದಕರಿ, ಹಿರಿಯ ಮುಖಂಡರಾದ ಲಕ್ಷ್ಮಣ್ ನಾಯಕ್, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಎಸ್. ಕೊಲ್ಲಾಭೋವಿಯವರು ಉಪಸ್ಥಿತರಿದ್ದರು.

No comments:
Post a Comment