ಕಾಫಿ ಮೇಲಿನ ಸಾಲವನ್ನು ಸರ್ಫೇಸಿ ಕಾಯಿದೆಯಿಂದ ಮುಕ್ತಗೊಳಿಸಬೇಕು ಎಂದು ಕೇಂದ್ರ ಹಣಕಾಸು ಸಚಿವರಿಗೆ ಮನವರಿಕೆ ಮಾಡಿಕೊಟ್ಟು, ರೈತರಿಗೆ ಅನುಕೂಲ ಮಾಡಿಕೊಟ್ಟ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರಿಗೆ ಮೂಡಿಗರೆ ಜೆಡಿಎಸ್ ಕ್ಷೇತ್ರ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ ಎಂದು ಜೆಡಿಎಸ್ ಮುಖಂಡ ಗಬ್ಬಳ್ಳಿ ಚಂದ್ರೇಗೌಡ ಹೇಳಿದರು.
ಅವರು ಶನಿವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು, ಜನಸಾಮಾನ್ಯರ ಸಮಸ್ಯೆ ಎದುರಾದಾಗ ದೇವೇಗೌಡರು ಸದಾ ಧ್ವನಿ ಎತ್ತುತ್ತಾ ಬಂದಿದ್ದಾರೆ. ಬೆಳೆಗಾರರ ಸಂಘಟನೆ ದೆಹಲಿಗೆ ನಿಯೋಗ ತೆರಳಿ ದೇವೇಗೌಡರನ್ನು ಭೇಟಿ ಮಾಡಿ ಸರ್ಫೇಸಿ ಕಾಯಿದೆಯಿಂದ ರೈತರಿಗಾಗುತ್ತಿರುವ ತೊಂದರೆ ಬಗ್ಗೆ ಹೇಳಿಕೊಂಡಿದ್ದರು. ಆಗ ಖುದ್ದು ದೇವೇಗೌಡರೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಂ ಅವರೊಂದಿಗೆ ಮಾತನಾಡಿ, ಸಮಸ್ಯೆ ಗಂಭೀರತೆ ಬಗ್ಗೆ ಮನವರಿಕೆ ಮಾಡಿದ್ದಾರೆ. ಇದರಿಂದ ಕೇಂದ್ರ ಸಚಿವರು ತಕ್ಷಣ ಸ್ಪಂದಿಸಿ, ಸರ್ಫೇಸಿ ಕಾಯಿದೆಯಡಿ ಯಾವುದೇ ಕಾಫಿ ತೋಟಗಳನ್ನು ಹರಾಜು ಮಾಡದಂತೆ ಸ್ಥಗಿತಗೊಳಿಸಬೇಕು ಎಂದು ಆದೇಶಿಸಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲಿಯೂ ದೇವೇಗೌಡರು ರೈತರ ಪರ ಕಾಳಜಿ ವಹಿಸುತ್ತಿರುವುದು ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆಂದು ಹೇಳಿದರು.
ಜೆಡಿಎಸ್ ರೈತ ವಿಭಾಗದ ಮೂಡಿಗೆರೆ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಂದ್ರ ಹ್ಯಾರಗುಡ್ಡೆ ಮಾತನಾಡಿ, ಈ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಾರ್ಮಿಕರು ತೋಟಗಳಿಗೆ ತೆರಳಲು ಭಯಪಡುವಂತಾಗಿದೆ. ಪ್ರಾಣ ಹಾನಿಯಾದ ಬಳಿಕ ಕಾಡಾನೆ ಹಿಡಿಯುವ ಗೋಜಿಗೆ ಹೋಗುವುದನ್ನು ಬಿಟ್ಟು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಶಾಸಕರು ಪ್ರಯತ್ನಿಸಬೇಕು. ಅಲ್ಲದೇ ಕಳೆದ 2 ವರ್ಷದಿಂದ ರೈತರಿಗೆ ಸಹಕಾರ ಸಂಘದಿಂದ ಯಾವುದೇ ಹೊಸ ಸಾಲ, ಹೆಚ್ಚುವರಿ ಸಾಲ ನೀಡುತ್ತಿಲ್ಲ. ಇದು ಸರಕಾರ ದಿವಾಳಿಯಾಗಿದೆಯೇ ಎಂಬ ಪ್ರಶ್ನೆ ಮೂಡಿಸುತ್ತಿದೆ. ರೈತರಿಗೆ ಸಹಕಾರ ಸಂಘಗಳಿಂದ ಸಾಲ ನೀಡಲು ಸರಕಾರ ಕ್ರಮ ವಹಿಸಬೇಕು. ಈ ಭಾಗದಲ್ಲಿ ಫಾ.ನಂ 50 ಮತ್ತು 53 ಯಲ್ಲಿ ಅಕ್ರಮ ಅರ್ಜಿಗಳನ್ನು ಹೊರತುಪಡಿಸಿ ನೈಜ ರೈತರು ಪಡೆದುಕೊಂಡು ಜಮೀನನ್ನು ಸರಕಾರ ಕಿತ್ತುಕೊಳ್ಳಬಾರದೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಎಂ.ಜಿ.ಸತ್ಯ, ಕಿರಣ್ ಮಾಕೋನಹಳ್ಳಿ ಉಪಸ್ಥಿತರಿದ್ದರು.

No comments:
Post a Comment