ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಮತ್ತು ಭವ್ಯ ಭವಿಷ್ಯ ರೂಪುಗೊಳ್ಳುವುದು ಶಾಲೆಗಳಿಂದ ಮಾತ್ರ ಸಾಧ್ಯ, ಬಡ ಮಕ್ಕಳು ಪ್ರತಿಭಾವಂತರಾಗಲು ಸರಕಾರಿ ಶಾಲೆ ಅತ್ಯವಶ್ಯಕವಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಅವರು ಭಾನುವಾರ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ವೇದಿಕೆಯಲ್ಲಿ ಏರ್ಪಡಿಸಿದ್ದ ಶಾಲೆಯ ಶತಮಾನೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಧಾನಸೌಧ ಕಟ್ಟಿಸಿದಂತಹ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಈ ಶಾಲೆ ಉದ್ಘಾಟಿಸಿರುವುದು ಚಾರಿತ್ರಿಕ ವಿಚಾರ. ರಾಜ್ಯದಲ್ಲಿ ವರ್ಷಕ್ಕೆ 40ಸಾವಿರ ಕೋಟಿ ರೂ ಶಿಕ್ಷಣಕ್ಕೆ ಖರ್ಚು ಮಾಡುತ್ತಿದ್ದು, 7ಲಕ್ಷಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿರುವ 48 ಸಾವಿರ ಸರಕಾರಿ ಶಾಲೆಯಲ್ಲಿ 7 ಸಾವಿರ
ಶಾಲೆ ಮುಚ್ಚುವ ಸ್ಥಿತಿಗೆ
ಬಂದಿದೆ ಎಂಬ ವರದಿ ದೊರಕಿದೆ. ಇದಕ್ಕೆ ಕಾರಣ ಖಾಸಗಿ ಶಾಲೆ ಹಾಗೂ ನಾನಾ ಕಾರಣಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಶಾಲೆ ಉಳಿಸಿ ಬೆಳೆಸಿ ಶತಮಾನೋತ್ಸವ ಆಚರಣೆ ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿ, ಆಳುವ ಸರಕಾರಗಳು ಪ್ರಮುಖವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಅನುದಾನ ಕಡಿಮೆ ಪ್ರಮಾಣದಲ್ಲಿ ಕೊಡುತ್ತಿದೆ. ಇದು ಆಗಬಾರದು. ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಬಜೆಟ್ನಲ್ಲಿ ಅಧಿಕ ಹಣ ಮೀಸಲಿಡಬೇಕೆಂದು ಒತ್ತಾಯಿಸಿದರು.
ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಒಂದು ಶಾಲೆ ಯಶಸ್ಸಿನತ್ತ ಸಾಗಬೇಕೆಂದರೆ ಶಿಕ್ಷಕರು, ಪೋಷಕರು, ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಸಾಮಾನ್ಯ ಪ್ರಜ್ಞೆ ಜಾಗೃತಗೊಳಿಸುವಂತಹ ಭಾವನೆ
ಹಾಗೂ ಪ್ರತಿಭೆಗಳು ಮಕ್ಕಳಲ್ಲಿರುತ್ತದೆ. ಅದನ್ನು ಗುರುತಿಸಿ ಹೊರ ತರುವ ಸಾಂಸ್ಕøತಿಯಾದ ಜವಾಬ್ದಾರಿ ಹಾಗೂ ಗುರುಪರಂಪರೆ ಹೊಂದಿರುವ ಈ ನಾಡನ್ನು ಮುಂದುವರೆಸಿಕೊಂಡು ಹೋಗುವುದು ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಶಾಸಕಿ ನಯನಾ ಮೋಟಮ್ಮ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರಿ ಶಾಲೆಗಳನ್ನು ಕ್ರೂಢೀಕರಿಸಿ ಖಾಸಗಿ ಶಾಲೆಗಳಿಗೆ ಮೀರಿಸುವಂತೆ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆ ಪ್ರಾರಂಭಿಸಲು ಸರಕಾರ ಚಿಂತನೆ ನಡೆಸಿದೆ. ಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿರುವ ಶೌಚಾಲಯಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಸ್ವಚ್ಛತೆ, ಶಿಸ್ತು ಸೇರಿದಂತೆ ಶಾಲೆಯಲ್ಲಿ ಮಕ್ಕಳಿಗೆ ಅಗತ್ಯ ವ್ಯವಸ್ಥೆ ರೂಪಿಸಿಕೊಂಡರೆ ಎಲ್ಲಾ ಸರಕಾರಿ ಶಾಲೆಗಳು ಶತಮಾನೋತ್ಸವ ಆಚರಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಮತ್ತು ಸ್ಮರಣ
ಸಂಚಿಕೆ ಸಂಪಾದಕ ಡಾ. ಡಿ.ಸಿ.ರವಿಕುಮಾರ್ ಸಿದ್ರಬನ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಡಿ.ಬಿ.ಜಯಪ್ರಕಾಶ್, ಎಸ್ಡಿಎಂಸಿ ಅಧ್ಯಕ್ಷ ಕೆ.ಎಸ್.ರಮೇಶ್, ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಸಿದ್ದೇಶ್, ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳ್, ರಂಜನ್ ಅಜಿತ್ಕುಮಾರ್, ಡಿ.ಕೆ.ಉದಯಶಂಕರ್, ದೀಪಕ್ದೊಡ್ಡಯ್ಯ, ಡಿ.ಬಿ.ಅಶೋಕ್, ಎಂ.ಎಂ. ಲಕ್ಷ್ಮಣ್ಗೌಡ ಮಗ್ಗಲಮಕ್ಕಿ, ಡಿ.ಆರ್.ರಘುಪತಿ, ಶಾಲೆ ಮುಖ್ಯ ಶಿಕ್ಷಕಿ ಜಿ.ರೂಪ ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಕಲಿತು
ಉನ್ನತ ಸಾಧನೆ ಮಾಡಿದ ಸಾಧಕರನ್ನು, ನಿವೃತ್ತ ಯೋಧರನ್ನು, ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ವೃಂದದವರನ್ನು, ಪ್ರತಿಭಾವಂತ
ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.



No comments:
Post a Comment