ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಸಿರ್ ಹುಸೇನ್ (58) ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟರು.
ಕುಂದಾಪುರದಲ್ಲಿ ಪೊಲೀಸ್ ಇಲಾಖೆಯಿಂದ
ಭಾನುವಾರ ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಿಎಸ್ಐ ನಾಸೀರ್ ಹುಸೇನ್ ಭಾಗವಹಿಸಿದ್ದರು. ಮ್ಯಾರಾಥಾನ್ ನಲ್ಲಿ 4 ಕಿ.ಮೀ. ದೂರ ಕ್ರಮಿಸಿದ ಬಳಿಕ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು.
ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೃತದೇಹವನ್ನು ಕುಂದಾಪುರಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಪೊಲೀಸ್ ಗೌರವ ಸಲ್ಲಿಕೆ ಬಳಿಕ ಸಾರ್ವಜನಿಕರಿಂದ ಶ್ರದ್ಧಾಂಜಲಿ
ನಡೆಸಿ ನಾಸೀರ್ ಹುಸೇನ್ ಅವರ ಹುಟ್ಟೂರಾದ ಮೂಡಿಗೆರೆ
ತಾಲೂಕಿನ ಗೋಣಿಬೀಡಿಗೆ ಮೃತದೇಹವನ್ನು ತರಲಾಯಿತು.
ಮಾ.2ರಂದು ಪೊಲೀಸ್ ಇಲಾಖೆಯಿಂದ ಗೌರವ ಸಲ್ಲಿಕೆ ಮತ್ತು ಸಾರ್ವಜಿನಿಕರಿಂದ ಶ್ರದ್ಧಾಂಜಲಿ ಸಭೆ ಬಳಿಕ ಗೋಣಿಬೀಡು ಗ್ರಾಮದ ಖಬರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಗೋಣಿಬೀಡು ಮೂಲದ ನಾಸೀರ್ ಹುಸೇನ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಭಾರತೀಯ ಸೇನೆಯಲ್ಲಿ 15 ವರ್ಷ ಕಾಶ್ಮೀರ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಚಿಕ್ಕಮಗಳೂರಿನ ಐಡಿ ಪೀಠ ಗ್ರಾಪಂನಲ್ಲಿ 1 ವರ್ಷ ಪಿಡಿಒ ಆಗಿದ್ದರು. ಆಗಲೆ ಪಿಎಸ್ಐ ಹುದ್ದೆಗೆ ನೇಮಕವಾಗಿದ್ದರು. ಉಡುಪಿ ಜಿಲ್ಲೆಯ ವಿವಿಧ ಠಾಣೆಯಲ್ಲಿ ಮತ್ತು ಚಿಕ್ಕಮಗಳೂರು ನಗರದ ಸೆನ್ ಠಾಣೆಯಲ್ಲಿ ಕರ್ತವ್ಯನಿರ್ವಹಿಸಿದ್ದಾರೆ.
ನಾಸೀರ್ ಅವರ ಪತ್ನಿ ಹಾಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಅವರ ಪುತ್ರ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ, ಪುತ್ರಿ ಕಾರ್ಕಳದ ನಿಟ್ಟೆ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
ಗೋಣಿಬೀಡಿಗೆ ಪಾರ್ಥೀವ ಶರೀರ ಆಗಮಿಸಿದ
ಸಂದರ್ಭದಲ್ಲಿ ನೂರಾರು ಜನರು ನೆರೆದು ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ವಿವಿಧ ಸಂಘಟನೆಗಳು,
ರಾಜಕೀಯ ಪಕ್ಷಗಳು, ನಿವೃತ್ತ ಯೋಧರ ಸಂಘ ಸೇರಿದಂತೆ ಅನೇಕರು ಉಪಸ್ಥಿತರಿದ್ದು ನಾಸೀರ್ ಅವರ ದೇಶಭಕ್ತಿ
ಮತ್ತು ಕರ್ತವ್ಯನಿಷ್ಠೆಯನ್ನು ಸ್ಮರಿಸಿದರು.


No comments:
Post a Comment